ಕ್ಲೆರೋ, ಅಲೆಕ್ಸಿಸ್ ಕ್ಲಾಡ್
1713-1765. ಫ್ರೆಂಚ್ ಗಣಿತಶಾಸ್ತ್ರಜ್ಞ. ಈತ ಜನಿಸಿದ್ದು ಪ್ಯಾರಿಸ್ಸಿನಲ್ಲಿ (ಮೇ 7 ಅಥವಾ 13, 1713). ಹತ್ತರ ಹರೆಯದಲ್ಲೇ ಕಲನಶಾಸ್ತ್ರವನ್ನು ಅಭ್ಯಸಿಸುತ್ತಿದ್ದ ಮೇಧಾವಿ ಈತ. ಹದಿಮೂರನೆಯ ವಯಸ್ಸಿನಲ್ಲಿ ಗಣಿತಶಾಸ್ತ್ರಕ್ಕೆ ಸಂಬಂಧಿಸಿದ ಹಲವಾರು ವಿಷಯಗಳ ಮೇಲೆ ಪ್ರೌಢ ಲೇಖನಗಳನ್ನು ಬರೆದದ್ದುಂಟು. ಹದಿನೆಂಟನೆಯ ವಯಸ್ಸಿನಲ್ಲಿ ಇವನು ಪ್ರಕಟಿಸಿದ ಗಣಿತಶಾಸ್ತ್ರದ ಬಗೆಗಿನ ಪುಸ್ತಕವೊಂದರ ಸಲುವಾಗಿ ಫ್ರೆಂಚ್ ಅಕೆಡಮಿ ಆಫ್ ಸೈನ್ಸಸ್ಸಿನ ಸದಸ್ಯತ್ವ ಕ್ಲೆರೋಗೆ ಲಭಿಸಿತು(1731). ಕ್ಲೆರೋ ಮತ್ತೊಬ್ಬ ಗಣಿತಜ್ಞ ಮೋಪರ್‍ಟ್ಯೂಯಿ (1698-1759)  ಸಂಗಡ ಉತ್ತರ ಯೂರೋಪಿನ ಲ್ಯಾಪ್ಲ್ಯಾಂಡಿಗೆ ಹೋಗಿ ಅಲ್ಲಿ ಮಧ್ಯಾಹ್ನರೇಖೆಯ ಉದ್ದವನ್ನು ನಿರ್ಧರಿಸುವಲ್ಲಿ ಆತನಿಗೆ ನೆರವಾದ. ಈ ಕೆಲಸ ಕ್ಲೆರೋಗೆ ಕೇಂದ್ರಾಪಗಾಮಿ ಬಲ ಮತ್ತು ಗುರುತ್ವಬಲಗಳ ಪರಿಸರದಲ್ಲಿ ಭೂಮಿಯಂಥ ಪರಿಭ್ರಮಿಸುವ ಕಾಯದ ಆಕಾರದ ಬಗ್ಗೆ ಒಂದು ಪುಸ್ತಕವನ್ನು ಬರೆಯಲು(1743) ನಾಂದಿ ಹಾಕಿಕೊಟ್ಟಿತು. ಇದರ ಬಗ್ಗೆ ಅಧ್ಯಯನ ಮತ್ತು ಸಂಶೋಧನೆಗಳನ್ನು ನಡೆಸಿದ ಐಸಾಕ್ ನ್ಯೂಟನ್ನನಿಗಿಂತಲೂ (1642-1721) ಈತ ಬಹುಪಾಲು ಮುಂದುವರಿದಿದ್ದ. ಭೂಮಿಯ ಮೇಲ್ಮೈ ಮೇಲೆ ವಿವಿಧ ಭಾಗಗಳಲ್ಲಿ ಗುರುತ್ವಬಲವನ್ನು ಅಳೆದು ಭೂಮಿಯ ಆಕಾರವನ್ನು ಕಂಡುಹಿಡಿಯಬಹುದೆಂಬುದನ್ನು ಪ್ರಯೋಗ ರೀತ್ಯ ತೋರಿಸಿದ. ಭೂಮಿಯಸುತ್ತ ಪ್ರದಕ್ಷಿಣೆ ಹಾಕುವ ಚಂದ್ರನ ಚಲನೆಯ ಬಗ್ಗೆ ಹೆಚ್ಚು ಅಧ್ಯಯನಗಳನ್ನು ಮಾಡಿದವರಲ್ಲಿ ಕ್ಲೆರೋ ಒಬ್ಬ. ಶುಕ್ರಗ್ರಹದ ಬಲ ಮತ್ತು ಚಂದ್ರನ ಸೆಳೆತ ಇವು ಯಾವ ರೀತಿ ಭೂಮಿಯ ಮೇಲೆ ಪರಿಣಾಮವೆಸಗುತ್ತವೆ ಎಂಬುದನ್ನು ಈತ ತೌಲನಿಕವಾಗಿ ಅಭ್ಯಾಸಮಾಡಿದ. ಮತೊಬ್ಬ ಫ್ರೆಂಚ್ ಖಗೋಳಶಾಸ್ತ್ರಜ್ಞ ಲಾಕಾಯ್ (1713-1762) ಈ ವಿಚಾರವಾಗಿ ಕಂಡುಕೊಂಡ ಅಂಶಗಳಲ್ಲಿ ಕೆಲವನ್ನು ತೆಗೆದುಕೊಂಡು ಅವುಗಳೊಡನೆ ತನ್ನವನ್ನೂ ಸೇರಿಸಿ ಶುಕ್ರದ ದ್ರವ್ಯ ರಾಶಿ ಎಷ್ಟೆಂಬುದನ್ನು ನಿರ್ಧರಿಸಿದ. ಇದು ಸಮಂಜಸವಾಗಿತ್ತು. ಹೀಗೆಯೇ ಚಂದ್ರನ ದ್ರವ್ಯರಾಶಿಯನ್ನೂ ಲೆಕ್ಕಹಾಕಿದ. ಈ ಅಂಕಿ ಅಂಶಗಳಲ್ಲಿ ಈಗ ತಾರತಮ್ಯವಿರುವುದಾದರೂ ಆಗಿನ ಕಾಲಕ್ಕೆ ಅವೇ ಅತ್ಯಂತ ಸಮಂಜಸವೆನಿಸಿದ್ದುವು.

	ಇಂಗ್ಲಿಷ್ ಖಗೋಳಶಾಸ್ತ್ರಜ್ಞ ಎಡ್ಮಂಡ್ ಹ್ಯಾಲಿ (1656-1742) ಆವಿಷ್ಕರಿಸಿದ್ದ ಧೂಮಕೇತು ಮತ್ತೆ ಗೋಚರವಾಗುವ ಕಾಲ ಆಗ ಸಮೀಪವಾಗುತ್ತಿತ್ತು. ಫ್ರೆಂಚ್ ಖಗೋಳಶಾಸ್ತ್ರಜ್ಞ ಲ್ಯಾಲಾಂಡನೊಡಗೂಡಿ ಕ್ಲೆರೋ ಗುರು ಮತ್ತು ಶನಿಗ್ರಹಗಳ ಗುರುತ್ವ ಬಲಗಳು ಈ ಧೂಮಕೇತುವಿನ ಮೇಲೆ ಉಂಟುಮಾಡುವ ಪರಿಣಾಮವನ್ನು ಕುರಿತು ಅಧ್ಯಯನ ನಡೆಸಿದ. ಇವೆರಡು ಬೃಹತ್ ಗ್ರಹಗಳು ಧೂಮಕೇತುವಿನ ಚಲನೆಯ ಮೇಲೆ ಬೀರುವ ಸಂಯುಕ್ತಪ್ರಭಾವದ ಪರಿಣಾಮವಾಗಿ ಅದು ಸೂರ್ಯನೀಚ ಬಿಂದುವನ್ನು 1759ರ ಏಪ್ರಿಲ್ 13ನೆಯ ದಿವಸದ ವರೆಗೂ ತಲುಪುವುದು ಸಾಧ್ಯವಿಲ್ಲವೆಂದು ಕ್ಲೆರೋ ಹೇಳಿದ. 1758ರ ಕ್ರಿಸ್ಮಸ್ ದಿವಸದಂದು (ಡಿಸೆಂಬರ್25) ಈ ಧೂಮಕೇತು ಕಾಣಿಸಿಕೊಂಡಿತು. ಸೂರ್ಯನೀಚ ಬಿಂದುವನ್ನು ಅದು ತಲಪಿದ್ದು ಕ್ಲೆರೋ ಮುನ್ನುಡಿದಿದ್ದ ಕಾಲದ ಒಂದು ತಿಂಗಳ ಅಂತರದೊಳಗೆ ಎನ್ನುವಲ್ಲಿ ಈತನ ತರ್ಕ ಹಾಗೂ ಗಣನೆಯ ನಿಷ್ಕøಷ್ಟತೆ ಎಷ್ಟೆಂಬುದು ಸ್ಪಷ್ಟವಾಗುತ್ತದೆ. ಕ್ಲೆರೋ ಮಡಿದದ್ದು 1765ರ ಮೇ 17ರಂದು. 				(ನೋಡಿ- ಕ್ಲೇರೋ-ಸಮೀಕರಣ) 									*
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ